ಬ್ಯಾಡ್‍ಮಿಂಟನ್
ರ್ಯಾಕೆಟ್ ಮತ್ತು ಚೆಂಡು ಅಥವಾ ಷಟಲ್ ಕಾಕ್ ಉಪಯೋಗಿಸಿ ಅಡುವ ಒಳಾಂಗಣ ಆಟ. ಇದರಲ್ಲಿ ಎರಡು ರೀತಿಯ ಆಟವುಂಟು. ಷಟಲ್ ಕಾಕ್ ಉಪಯೋಗಿಸಿ ಆಡುವ ಆಟ ಷಟಲ್ ಬ್ಯಾಡ್ ಮಿಂಟನ್, ಮೃದು ಉಣ್ಣೆಯ ಚೆಂಡು ಬಳಸಿ ಅಡುವ ಆಟ ಬಾಲ್ ಬ್ಯಾಡ್‍ಮಿಂಟನ್. ಮೊದಲಿಗೆ ಭಾರತದಲ್ಲಿ ಆಂಗ್ಲ ಸೈನ್ಯಾಧಿಕಾರಿಗಳು 1870ರ ವೇಳೆಗೆ ಪುಣೆಯಲ್ಲಿ ಈ ಆಟ ಆಡುತ್ತಿದ್ದು ಇದನ್ನು ಪೂನಾಗೇಮ್ ಎಂದೇ ಕರೆಯುತ್ತಿದ್ದರು. ಇಂಗ್ಲೆಂಡಿನ ಗೌಸೆಸ್ಟರ್ ಷಿರಿನಲ್ಲಿ ಡ್ಯೂಕ್ ಆಫ್ ಬೋಪೋರ್ಟ್ ಎಂಬಾತನ ಮನೆಯಲ್ಲಿ 1873ರಲ್ಲಿ ಒಂದು ಸಂತೋಷಕೂಟ ನಡೆಯಿತು. ಆಗ ಅತಿಥಿಗಳ ಮನರಂಜನೆಗೆಂದು ಹೊಸ ಆಟದ ಯೋಜನೆ ಹಾಕಿ ಆಡಿದರು. ಇದಕ್ಕೆ ಡ್ಯೂಕನ ಬ್ಯಾಡ್ ಮಿಂಟನ್ ಹೌಸಿನ ಕಾರಣವಾಗಿ ಅದೇ ಹೆಸರು ಬಂತು. ಅನಂತರ 1899ರಲ್ಲಿ ಪ್ರಶಸ್ತಿಗಾಗಿ ಹೊಸ ನಿಯಮಾವಳಿಗಳಿಂದ ಕೂಡಿದ ಸ್ಪರ್ಧೆಗಳು ಆರಂಭವಾದುವು. ಅದೇ ವರ್ಷ ಆಲ್ ಇಂಗ್ಲೆಂಡ್ ಚಾಂಪಿಯನ್‍ಷಿಪ್ ಆರಂಭವಾಯಿತು. 1903ರಿಂದ 1928ರ ಅವಧಿಯಲ್ಲಿ ಸರ್ ಜಾರ್ಜ್ ಥಾಮಸ್ ಎಂಬಾತ ಇದನ್ನು 21 ಬಾರಿ ಗೆದ್ದುಕೊಂಡ. ಅನಂತರ ರಾಷ್ಟ್ರೀಯ ಪಂದ್ಯಗಳು ಆರಂಭವಾದುವು. 1934ರಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ ಮಿಂಟನ್ ಫೆಡರೇಷನ್ ಸ್ಥಾಪಿತವಾಯಿತು. ಈಗ ಸುಮಾರು 54 ರಾಷ್ಟ್ರಗಳು ಈ ಫೆಡರೇಷನ್ನಿನ ಸದಸ್ಯತ್ವ ಪಡೆದಿವೆ. ಮೊದಲನೆಯ ಮಹಾಯುದ್ಧದ ಅನಂತರ ಈ ಆಟ ಪ್ರಪಂಚದ ನಾನಾ ಭಾಗಗಳಿಗೆ ಹರಡಿತು ಎನ್ನಲಾಗಿದೆ.

ಇಂದು ಇದರಲ್ಲಿ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳಿವೆ. ಪುರುಷರಿಗಾಗಿ ಇಂಗ್ಲೆಂಡಿನ ಜಾರ್ಜ್ ಥಾಮಸ್‍ರಿಂದ ಸ್ಥಾಪಿತವಾದ ಥಾಮಸ್ ಕಪ್ ಸ್ಫರ್ಧೆ 1948ರಲ್ಲಿ ಆರಂಭವಾಯಿತು. ಇದರ ಮೊದಲ ಚಾಂಪಿಯನ್ ರಾಷ್ಟ್ರ ಮಲಯ. 1957ರಲ್ಲಿ ಮಹಿಳೆಯರಿಗಾಗಿ ಶ್ರೀಮತಿ ಉಬರ್ ಸ್ಥಾಪಿಸಿದ ಉಬರ್ ಕಪ್ ಸ್ಪರ್ಧೆ ಆರಂಭವಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನ ಇದನ್ನು ಮೊದಲಿಗೆ ಗೆದ್ದುಕೊಂಡಿತು. ಈ ಸ್ಪರ್ಧೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. 1973ರಲ್ಲಿ ಇಂಡೊನೇಷ್ಯ ಥಾಮಸ್ ಕಪ್ ಚಾಂಪಿಯನ್‍ಷಿಪ್ ಗಳಿಸಿತು.

ಷಟಲ್ ಕಾಕ್ ಬ್ಯಾಡ್ ಮಿಂಟನ್ ಆಟಕ್ಕೆ ಉಪಯೋಗಿಸುವ ಷಟಲ್ ಕಾಕ್‍ನ ತೂಕ ಸುಮಾರು 4.73ರಿಂದ 5.3ಗ್ರಾಮ್. ತೂಕವನ್ನು ಕ್ರೀಡಾಂಗಣದ ಹವೆಗೆ ತಕ್ಕಂತೆ ನಿರ್ಧರಿಸಲಾಗುತ್ತದೆ. ಷಟಲ್ ಕಾಕನ್ನು ಗೋಳಾರ್ಧ ಆಕಾರದ ಒಂದು ಅಂಗುಲ ಸುತ್ತಳತೆಯ ಕಾರ್ಕ್‍ಗೆ ಸುಮಾರು 14ರಿಂದ 16ರಷ್ಟು ಬಾತು ಗರಿಗಳನ್ನು ಸಿಕ್ಕಿಸಿ ಮಾಡಲಾಗಿರುತ್ತದೆ. ಗರಿಗಳನ್ನು ಕಾರ್ಕ್‍ನ ತುದಿಯಿಂದ ಸುಮಾರು 2.5ರಿಂದ 2.75 ಅಂಗುಲ ಉದ್ದವಾಗಿರುವಂತೆ ಕತ್ತರಿಸಿ ದಾರಗಳಿಂದ ಬಿಗಿದು ಬಿಗಿಯಾಗಿ ಅಂಟಿಸಲಾಗಿರುತ್ತದೆ. 

ಆಟದ ಮೈದಾನದಲ್ಲಿ ಸಾಮಾನ್ಯವಾಗಿ ಇಬ್ಬಿಬ್ಬರು ಎದುರಾಳಿಗಳಾಗಿ (ಡಬಲ್ಸ್) ನಿಂತು ಆಡಲು ಅನುಕೂಲತೆ ಉಂಟು. ಇದೇ ಮೈದಾನದಲ್ಲಿ ಒಬ್ಬೊಬ್ಬರು ಕೂಡ (ಸಿಂಗಲ್ಸ್) ನಿಂತು ಆಡಬಹುದು. ಆದರೆ ಒಬ್ಬೊಬ್ಬರು ಆಡುವಾಗ ಮೈದಾನವನ್ನು ಕಿರಿದುಗೊಳಿಸಲಾಗುತ್ತದೆ. 

ಇಬ್ಬರು ಆಡುವ ಮೈದಾನದ ಉದ್ದ 44 ಅಡಿ, ಅಗಲ 20 ಅಡಿ. ಆದರೆ ಒಬ್ಬರು ಆಡುವಾಗ ಅಗಲವನ್ನು 17 ಅಡಿಗೆ ಸೀಮಿತ ಮಾಡಲಾಗುತ್ತದೆ. ಉದ್ದ ಅಷ್ಟೇ ಇರುತ್ತದೆ. ಆಟದ ಮೈದಾನದ ಮಧ್ಯೆ 2.5 ಅಡಿ ಅಗಲವಿರುವ ದಾರದಿಂದ ನೇಯ್ದ ನೆಟ್ಟನ್ನು ನೆಲದಿಂದ 5 ಅಡಿ ಎತ್ತರದಲ್ಲಿ ಕಟ್ಟಲಾಗಿರುತ್ತದೆ. ಮೈದಾನದ ಅಂಚುಗಳಲ್ಲಿ ನೆಟ್ ನೆಲದಿಂದ 5 ಅಡಿ 1 ಅಂಗುಲ ಎತ್ತರವಿರುತ್ತದೆ. ಈ ಮಧ್ಯೆ ಭಾಗವನ್ನು 1.5 ಅಂಗುಲ ಅಗಲದಲ್ಲಿ ಬಿಳಿ ಬಣ್ಣದಿಂದ ಗುರುತಿಸಲಾಗಿರುತ್ತದೆ. 

ಸಾಮಾನ್ಯವಾಗಿ ಇಬ್ಬರು ಅಥವಾ ಒಬ್ಬರು ಷುರುಷರು ಆಡುವಾಗ ಈ ಆಟವನ್ನು 15ರಿಂದ 21 ಗೆಲ್ಲಂಕಗಳಿಗೆ ಸೀಮಿತಗೊಳಿಸುತ್ತಾರೆ. ಅದೇ ಸ್ತ್ರೀಯರು ಒಬ್ಬೊಬ್ಬರು ಆಡುವಾಗ ಇದನ್ನು 11 ಗೆಲ್ಲಂಕಗಳು ಇಬ್ಬರು ಆಡುವಾಗ 15 ಗೆಲ್ಲಂಕಗಳಿಗೆ ಸೀಮಿತಗೊಳಿಸಲಾಗುತ್ತದೆ. 

ಭಾರತದಲ್ಲಿ ಬ್ಯಾಡ್‍ಮಿಂಟನ್ ಎರಡನೆಯ ಮಹಾಯುದ್ಧದ ಅನಂತರ ಭರದಿಂದ ಬೆಳೆದಿದೆ. ಇದರಲ್ಲಿ ಅನೇಕ ಸ್ತ್ರೀಷುರುಷರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಪೈಕಿನಂದು ನಾಡೇಕರ ಹಾಗೂ ಕರ್ನಾಟಕದ ಪ್ರಕಾಶ್ ಪಡುಕೋಣೆ ಮುಖ್ಯರು.

ಷಟಲ್ ಬ್ಯಾಡ್‍ಮಿಂಟನ್ ಆಟಕ್ಕೂ ಬಾಲ್ ಬ್ಯಾಡ್‍ಮಿಂಟನ್ ಆಟಕ್ಕೂ ಕೆಲವು ವ್ಯತ್ಯಾಸಗಳಿವೆ. ಉಣ್ಣೆಯ ಚೆಂಡಿನಿಂದ ಆಡುವ ಆಟಕ್ಕೆ ಬಾಲ್‍ಬ್ಯಾಡ್‍ಮಿಂಟನ್ ಎನ್ನುತ್ತಾರೆ. ಚಂಡು ಸುಮಾರು ಒಂದೂಕಾಲು ಔನ್ಸ್ ತೂಕವಿದ್ದು ಸುಮಾರು 2 ಅಂಗುಲ ವ್ಯಾಸವಿರುತ್ತದೆ. 

ಈ ಆಟದ ಅಂಗಣ 80 ಅಡಿ ಯದ್ದ 40 ಅಡಿ ಅಗಲವಿದ್ದು ಸರಿಯಾಗಿ ಮಧ್ಯದಲ್ಲಿ ನೆಟ್‍ಗೆರೆ ಇರುತ್ತದೆ. ಕಂಬಗಳನ್ನು ಆಟದ ಗೆರೆಯಿಂದ 3 ಅಡಿ ಹೊರಗೆ ಹಾಕಿ ನೆಟ್ ಕಟ್ಟಬೇಕು. ನೆಟ್ಟಿನ ಮೇಲ್ಗಡೆ ಅಂಚು ನೆಲದಿಂದ 6 ಅಡಿ ಎತ್ತರವಿರಬೇಕು. ಎರಡೂ ಕಡೆಗಳಲ್ಲಿ ನೆಟ್ ಗೆರೆಯಿಂದ 40 ಅಡಿ ದೂರದಲ್ಲಿ ಎಲ್ಲೆ ಗೆರೆ ಹಾಕಿರಲಾಗುತ್ತದೆ. ನೆಟ್ ಗೆರೆಯ ಎರಡು ಕಡೆಗಳಲ್ಲೂ 3 ಅಡಿ ದೂರದಲ್ಲಿ ಸರ್ವಿಂಗ್ ಕ್ರೀಸ್ (ಗೆರೆ) ಹಾಕಿರುತ್ತಾರೆ. ಎಲ್ಲೆ ಗೆರೆಯಿಂದ ಸರ್ವಿಂಗ್ ಗೆರೆಯವರಿಗೆ ಅಂಗಣವನ್ನು ಸಮವಾಗಿ ವಿಭಾಗಿಸಿ ಮಧ್ಯೆ ಗೆರೆ ಹಾಕಿ ಎಡ ಬಲ ಅಂಗಣಗಳನ್ನು ಮಾಡಿರುತ್ತಾರೆ.

ಒಂದು ತಂಡದಲ್ಲಿ ಐವರು, ಇಬ್ಬರು ಹಾಗೂ ಒಬ್ಬ ಆಟಗಾರರಿದ್ದು ಆಟ ಆಡುತ್ತಾರೆ.

ಪಂದ್ಯ ಆರಂಭಿಸುವ ಮುನ್ನ ಕೈ ಎಸಕ (ಟಾಸ್) ಹಾಕಲಾಗುತ್ತದೆ. ಇದರಲ್ಲಿ ಗೆದ್ದವರು ಬೇಕಾದ ಅಂಗಣ ಹಾಗೂ ಮೊದಲು ಆಡುವ ಹಕ್ಕು ಪಡೆಯುತ್ತಾರೆ. ಕೈಯನ್ನು ಸೊಂಟದಿಂದ ಮೇಲಕ್ಕೆ ಎತ್ತದೆ ಸರ್ವ್ ಮಾಡಬೇಕು. ಚಂಡು ನೆಟ್ಟನ್ನು ದಾಟಿ ಎದುರು ಅಂಗಣದ ಸರ್ವಿಂಗ್ ಕ್ರೀಸಿನಿಂದಾಚೆಗೆ ಬೀಳುವಂತಿರಬೇಕು. ಹೀಗೆ ಸರ್ವ್ ಮಾಡಿದ ಚಂಡನ್ನು ಎದುರಾಳಿ ಅದು ನೆಲಕ್ಕೆ ಬೀಳುವ ಮೊದಲು ಹೊಡೆಯಬೇಕು.

ಒಂದು ಆಟಕ್ಕೆ ಗೆಲ್ಲಂಕ 29. ಆಟದಲ್ಲಿ 27 ಗೆಲ್ಲಂಕಗಳಾದಾಗ ಹೋಪ್ ಬಾಲ್ ಎಂದೂ 28ಕ್ಕೆ ಗೇಮ್ ಬಾಲ್ ಎಂದೂ ಕರೆಯುತ್ತಾರೆ. ಎದುರು ಪಕ್ಷದವರು ತಪ್ಪು ಮಾಡಿದರೆ ಅಥವಾ ಚಂಡನ್ನು ಹಿಂತಿರುಗಿಸದಿದ್ದರೆ ಸರ್ವ್ ಮಾಡಿದ ಕಡೆಗೆ ಗೆಲ್ಲಂಕ ಸಿಗುತ್ತದೆ.

ಪಂದ್ಯದಲ್ಲಿ ಮೂರು ಆಟಗಳನ್ನು ಆಡುತ್ತಾರೆ. ಎರಡು ಆಟಗಳಲ್ಲಿ ಗೆದ್ದ ತಂಡ ಜಯಶಾಲಿಯಾಗುತ್ತದೆ. ಪ್ರತಿಯೊಂದು ಆಟ ಮುಗಿದಾಗ ತಂಡಗಳು ಅಂಗಣವನ್ನು ಬದಲಾಯಿಸಿಕೊಳ್ಳುತ್ತವೆ. ಹೊಸ ಆಟ ಆರಂಭಿಸುವುದು ಗೆದ್ದ ತಂಡ. ಪ್ರತಿ ಪಂದ್ಯಕ್ಕೆ 5 ಮಿನಿಟ್ ವಿರಾಮವಿರುತ್ತದೆ.

ಇದರಲ್ಲಿ ಒಬ್ಬ ಅಂಪೈರ್, ಒಬ್ಬ ನೆಟ್ ರೆಫರಿ, ಒಬ್ಬ ಸ್ಕೋರರ್ ಹಾಗೂ ಇಬ್ಬರು ಗೆರೆ ರೆಫರಿಗಳಿದ್ದು ಇವರು ಪಂದ್ಯ ನಡೆಸುತ್ತಾರೆ. ಅಂಪೈರನ ತೀರ್ಮಾನವೇ ಕೊನೆಯದು. ಸ್ಕೋರರ್ ಗೆಲ್ಲಂಕಗಳನ್ನು ದಾಖಲೆ ಮಾಡಿಕೊಂಡು ಹೇಳುತ್ತಿರುತ್ತಾನೆ.

ಆಟದಲ್ಲಿ ಅರ್ಧ ಅಂಗಣ ಮಾತ್ರ ಆಡುವ ಸ್ಥಳ. ಒಬ್ಬರ ಇಬ್ಬರ ಆಟದಲ್ಲಿ ಮೇಲಿನ ಅಂಗಣ ಮಾತ್ರ ಆಡುವ ಸ್ಥಳವಾಗಿರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ